'ಸಂಸದ್ ಧ್ವನಿ' 5 ನೇ ಆವೃತ್ತಿಯಲ್ಲಿ ನೂತನ ಕೃಷಿ ಕಾಯ್ದೆಗಳ ಕುರಿತ ವಿಮರ್ಶೆ

ನೂತನ ಕೃಷಿ ಕಾಯ್ದೆಯು ಸ್ವಾವಲಂಬಿ, ಸ್ವಾಭಿಮಾನಿ ರೈತ, ಆತ್ಮನಿರ್ಭರ ಭಾರತಕ್ಕೆ ಮುನ್ನಡಿಯಾಗಿದೆ : ಸಂಸದ ಶ್ರೀ ತೇಜಸ್ವೀ ಸೂರ್ಯ

ಡಿಸೆಂಬರ್ 20, ಬೆಂಗಳೂರು :

  
'ಸಂಸದ್ ಧ್ವನಿ' 5 ನೇ ಆವೃತ್ತಿಯಲ್ಲಿನೂತನ ಕೃಷಿ ಕಾಯ್ದೆಗಳ ಕುರಿತ ವಿಮರ್ಶೆ ಕಾರ್ಯಕ್ರಮದಲ್ಲಿ ಮಾತನಾಡಿದ ಬೆಂಗಳೂರು ದಕ್ಷಿಣ ಸಂಸದರಾದ ಶ್ರೀ ತೇಜಸ್ವೀ ಸೂರ್ಯ ರವರು,"ಭಾರತದಲ್ಲಿ ವಿದೇಶೀ ಆಕ್ರಮಣಗಳು ಆಗುವ ಮುಂಚೆ  ರೈತರ ಸ್ಥಿತಿಗತಿ, ಕೃಷಿಯ ಸಮೃದ್ಧಿಯ ಕುರಿತು ಅನೇಕ ಕುರುಹುಗಳನ್ನು ಕಾಣಬಹುದಾಗಿತ್ತು.

ಭಾರತೀಯ ಮಾರುಕಟ್ಟೆಯನ್ನು ತಮ್ಮ ಹಿಡಿತಕ್ಕೆ ಇಟ್ಟುಕೊಂಡು ಬಂಡವಾಳಶಾಹಿ ವ್ಯವಸ್ಥೆಗೆ ಪುರಕವಾಗಿದ್ದ ಕಾನೂನುಗಳನ್ನು ಬ್ರಿಟಿಷರು ಜಾರಿಗೆ ತಂದಿದ್ದರು. ಆದರೆ,ದೇಶಕ್ಕೆ ಸ್ವಾತಂತ್ರ್ಯ ಬಂದ ತರುವಾಯ ಹಳೆಯ ಕಾನೂನುಗಳನ್ನೆಲ್ಲ ಕಿತ್ತುಹಾಕಲು ಏಕೆ ಈ ಹಿಂದಿನ ಕಾಂಗ್ರೆಸ್ ಸರ್ಕಾರ ಪ್ರಯತ್ನಿಸಲಿಲ್ಲ?

 ಕಳೆದ 70 ವರ್ಷಗಳಲ್ಲಿ, ವಸಾಹತುಶಾಹಿ ಕಾಲದಿಂದಲೂ ಜಾರಿಯಲ್ಲಿದ್ದ ಕಾನೂನನ್ನು ಕಿತ್ತು ಹಾಕಿ, ನಮ್ಮ ರೈತರ ಹಿತಾಸಕ್ತಿ ರಕ್ಷಣೆಗೆ ಇಲ್ಲಿಯವರೆಗಿನ ಸರ್ಕಾರಗಳು ಏಕೆ ಪ್ರಯತ್ನಿಸಲಿಲ್ಲ?

ಭಾರತಕ್ಕೆ  ಸ್ವಾತಂತ್ರ್ಯ ಬಂದು 7 ದಶಕಗಳೇ ಕಳೆದಿವೆ.ಆದರೆ, ರೈತರಿಗೆ ತಮ್ಮ ಬೆಳೆಗಳನ್ನು ನೇರವಾಗಿ ಮಾರಾಟ ಮಾಡುವ ಸ್ವಾತಂತ್ರ್ಯವನ್ನು ರೈತರಿಗೆ ಒದಗಿಸಿದ್ದು ನರೇಂದ್ರ ಮೋದಿ ಸರ್ಕಾರದ ಬಹು ದೊಡ್ಡ ಐತಿಹಾಸಿಕ ಸಾಧನೆ. ನೂತನ ಕಾಯ್ದೆಯಲ್ಲಿನ ನಿಯಮಗಳ ಪ್ರಕಾರ ರೈತರು ತಮ್ಮ ಉತ್ಪನ್ನಗಳನ್ನು ತಮಗೆ ಬೇಕಾದ ಕಡೆಯಲ್ಲಿ ಮಾರಿಕೊಳ್ಳಬಹುದು.

ಖರೀದಿದಾರ ಕಂಪನಿ  ಮತ್ತು ರೈತರ ನಡುವಿನ ಒಪ್ಪಂದಗಳು ಕೇವಲ ರೈತ ಬೆಳೆಯುವ ಪದಾರ್ಥಗಳೊಂದಿಗೆ ಇರುತ್ತದೆಯೇ ವಿನಃ ರೈತರ ಜಮೀನುಗಳೊಂದಿಗೆ ಖಂಡಿತ ಇಲ್ಲ. ಆದರೆ, ಕಾಂಗ್ರೆಸ್ ಕೃಪಾಪೋಷಿತ ನಾಟಕ ಮಂಡಳಿಯ ಸದಸ್ಯರು ರೈತರಲ್ಲಿ ಅನಗತ್ಯ ಗೊಂದಲ ಮೂಡಿಸುವ ವ್ಯರ್ಥ ಪ್ರಯತ್ನ ನಡೆಸುತ್ತಿರುವುದು ಈ ದೇಶದ ರೈತರಿಗೆ ಮಾಡುತ್ತಿರುವ ಬಹುದೊಡ್ಡ ಅಪಮಾನ.

ರೈತನ ಬೆಳೆಗಳಿಗೆ ಎಲ್ಲಿ ಉತ್ತಮ ಬೆಲೆ ದೊರಕುತ್ತದೆಯೋ ಅಲ್ಲಿ ಮಾರುವಂತಹ ಹಕ್ಕು ಖಂಡಿತ ಇದೆ.ಆದರೆ, ರೈತರ ಹೆಸರಿನಲ್ಲಿ ಹೋರಾಟ ನಡೆಸುತ್ತಿರುವವರಿಗೆ ಕೃಷಿಕನ ಬೆಳವಣಿಗೆಯಾದರೆ ಏನು ತೊಂದರೆ?  ದೇಶದ ರೈತರು ಸ್ವಾಭಿಮಾನದಿಂದ ತಲೆ ಎತ್ತಿ ನಿಲ್ಲಲು ಈ ಕೃಷಿ ಕಾಯ್ದೆ ಪೂರಕವಾಗಿದೆ. ಸ್ವಾವಲಂಬಿ ರೈತ, ಸ್ವಾಭಿಮಾನಿ ಆತ್ಮನಿರ್ಭರ ಭಾರತಕ್ಕೆ ನರೇಂದ್ರ ಮೋದಿ ಸರ್ಕಾರ ಈ ಕಾಯ್ದೆ ಮೂಲಕ ಅಡಿಗಲ್ಲು ಹಾಕಿದ್ದು, ಈ ಕಾಯ್ದೆಯ ಮೂಲಭೂತ ಅಂಶಗಳನ್ನು ಪ್ರತಿ  ರೈತ ಕುಟುಂಬಕ್ಕೂ ಮನವರಿಕೆ ಮಾಡುವ ಅವಶ್ಯಕತೆ ಇದೆ." ಎಂದು ಸಂಸದ ಶ್ರೀ ತೇಜಸ್ವೀ ಸೂರ್ಯ ರವರು  ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಮನೀಶ್ ಕುಮಾರ್ (ಸಂಸ್ಥಾಪಕರು, ಬ್ಯಾಕ್ ಟು ವಿಲೇಜ್) ರವರು,  "ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಯನ್ನು ಸಂಪೂರ್ಣ ಗಮನಿಸಿದರೆ, ಇದರ ಕುರಿತು ಚರ್ಚೆಗೆ ಸರ್ವರಿಗೂ ಅವಕಾಶವಿದೆ.  ಆದರೆ, ಇದರಲ್ಲಿ ರೈತ ವಿರೋಧಿಯಾಗಿರುವ ಒಂದೇ ಒಂದು ಅಂಶವನ್ನೂ ಸಾರ್ವಜನಿಕರ ಮುಂದೆ ಪ್ರಸ್ತುತಪಡಿಸದೇ ಹೋರಾಟ ನಡೆಸುತ್ತಿರುವ ಕೆಲವೇ ಕೆಲವು ರಾಜಕೀಯ ಪ್ರೇರಿತ ಉದ್ದೇಶದ ಹೋರಾಟಗಾರರಿಗೆ ಇದರ ಕೂಲಂಕುಶ ಮಾಹಿತಿಯೇ ಇರದಿರುವುದು ನಿಜಕ್ಕೂ ದುರಂತ.

ನೂತನ ಕಾಯ್ದೆಯು ಕಾರ್ಪೊರೇಟ್ ಕಂಪನಿಗಳ ಪರವಾಗಿದೆ ಎಂದು ಹಬ್ಬಿಸುತ್ತಿರುವ ಸುಳ್ಳು ಸುದ್ದಿಗಳು ಖಂಡಿತವಾಗಿಯೂ ಕಪೋಲಕಲ್ಪಿತವಾಗಿವೆ. ಕಾಯ್ದೆಯ ನಿಯಮಾವಳಿಗಳು ಸಂಪೂರ್ಣ ರೈತರ ಹಿತವನ್ನು ಗಮನದಲ್ಲಿ ಇಟ್ಟುಕೊಂಡೇ ರೂಪಿಸಲಾಗಿದೆ" ಎಂದು ಬ್ಯಾಕ್ ಟು ವಿಲೇಜ್ ಸಂಸ್ಥೆಯ ಶ್ರೀ ಮನೀಶ್ ಕುಮಾರ್ ಅಂಕಿ ಅಂಶಗಳೊಂದಿಗೆ ವಿವರಿಸಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಾನ್ಯ ವಸತಿ ಸಚಿವರಾದ ಶ್ರೀ ವಿ ಸೋಮಣ್ಣ ನವರು, ಕೃಷಿ  ಕಾಯ್ದೆಯ ಕುರಿತು ವಿರೋಧ ಪಕ್ಷಗಳು ಮುಡಿಸುತ್ತಿರುವ ಗೊಂದಲಗಳನ್ನು ಪರಿಹರಿಸಲು 'ಸಂಸದ್ ಧ್ವನಿ' ವೇದಿಕೆಯ ಮೂಲಕ ಪ್ರಯತ್ನಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ ಎಂದು ಸಚಿವರಾದ ಶ್ರೀ ವಿ ಸೋಮಣ್ಣ ನವರು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಎನ್ ಆರ್ ರಮೇಶ್, ಶ್ರೀ ಸದಾನಂದ ಮಯ್ಯ, ಶ್ರೀ ಕೆ ಅರಸಪ್ಪ (ಅಧ್ಯಕ್ಷರು, ಕಾಸಿಯಾ) ಉಪಸ್ಥಿತರಿದ್ದರು.

ಪ್ರಕಟಣೆ :

ಬೆಂಗಳೂರು ದಕ್ಷಿಣ ಸಂಸದರ ಕಛೇರಿ.